ಜ್ಞಾನೋದಯ
ಮೌಲಿಕ ಸಾಹಿತ್ಯ ವ್ಯವಸಾಯ ಉದ್ದೇಶದಿಂದ ಪ್ರಕಟವಾಗುತ್ತಿದ್ದ ಹಿಂದಿ ಮಾಸಪತ್ರಿಕೆ. 1948ರಲ್ಲಿ ಪ್ರಾರಂಭವಾಗಿ 20 ವರ್ಷ ನಡೆಯಿತು. ಭಾರತೀಯ ಜ್ಞಾನಪೀಠ ಪ್ರಕಾಶನ ಇದನ್ನು ಕಲ್ಕತ್ತೆಯಿಂದ ಪ್ರಕಟಿಸುತ್ತಿತ್ತು. ಸಂಪಾದಕರು ಲಕ್ಷ್ಮೀಚಂದ್ರ ಜೈನ್. ಡಿಮೈ ಅಷ್ಟಪತ್ರದ 128 ಪುಟಗಳಿದ್ದ ಈ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ರೂ.1; ವಾರ್ಷಿಕ ಚಂದಾ ರೂ. 10. ಇದು ಅನೇಕ ವಿಶೇಷ ಶೀರ್ಷಿಕೆಗಳ ಪೂಜಾ ವಿಶೇಷಾಂಕಗಳನ್ನು ಪ್ರಕಟಿಸುತ್ತಿತ್ತು. ಕಥೆಗಳು, ಹರಟೆಗಳು, ವ್ಯಂಗ್ಯ ಲೇಖನಗಳು, ಆತ್ಮಕಥನಗಳು, ವ್ಯಕ್ತಿದರ್ಶನಗಳು, ಪ್ರವಾಸಿ ಕಥನಗಳು ಇದರಲ್ಲಿ ಪ್ರಮುಖವಾಗಿ ಪ್ರಕಟವಾಗುತ್ತಿದ್ದವು.			    (ಎಮ್.ವಿ.ಪಿ.ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ